ಕಡುಬಡತನದಲ್ಲಿದ್ದ ಬ್ರಾಹ್ಮಣ ವಿದ್ಯಾರ್ಥಿಗಳು ತಮ್ಮ ಉನ್ನತಶಿಕ್ಷಣ ಪಡೆಯಲು ಹಳ್ಳಿಯಿಂದ ಪಟ್ಟಣಕ್ಕೆ ಬರಬೇಕಿತ್ತು. ಪಟ್ಟಣದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಊಟದ ಸೌಕರ್ಯಗಳು ಇರಲಿಲ್ಲ. ವಿದ್ಯಾರ್ಥಿಗಳ ಪಾಲಕರುಗಳಿಗೆ ತಮ್ಮ ಮಕ್ಕಳನ್ನು ಪಟ್ಟಣದಲ್ಲಿ ಇಟ್ಟು ಓದಿಸುವಷ್ಟು ಸ್ಥಿತಿವಂತರಿರಲಿಲ್ಲ. ಶ್ರೀಗಳವರು ತಮ್ಮ ಸಂಚಾರ ಸಮಯದಲ್ಲಿ ವಿದ್ಯಾರ್ಥಿಗಳು ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡು ವಿದ್ಯಾರ್ಥಿನಿಲಯಗಳನ್ನು ಪ್ರಮುಖ ನಗರಗಳಲ್ಲಿ ಪ್ರಾರಂಭಿಸಬೇಕೆಂಬ ಸಾರ್ಥಕ ಸಂಕಲ್ಪವನ್ನು ಮಾಡಿದರು. ಗುರುಗಳ ಮನದಲ್ಲಿ ಬಂದಿದ್ದು ಬಹು ಬೇಗನೇ ಕಾರ್ಯರೂಪಕ್ಕೆ ಬಂತು.

ಉತ್ತರಕರ್ನಾಟಕದ ಧಾರವಾಡದಲ್ಲಿ ಪ್ರಪ್ರಥಮ ವಿದ್ಯಾರ್ಥಿನಿಲಯವನ್ನು ನಿರ್ಮಾಣಮಾಡಿ ಪ್ರಹ್ಲಾದ ವಿದ್ಯಾರ್ಥಿನಿಲಯವೆಂದು ನಾಮಕರಣ ಮಾಡಿದರು. ಮೈಸೂರಿನಲ್ಲಿ ಮಾಧ್ವ ಹಾಸ್ಟೆಲ್, ರಾಯಚೂರಿನಲ್ಲಿ ಶ್ರೀರಾಘವೇಂದ್ರ ವಿದ್ಯಾರ್ಥಿನಿಲಯ, ಗುಲ್ಬರ್ಗದಲ್ಲಿ ಶ್ರೀಜಯತೀರ್ಥ ವಿದ್ಯಾರ್ಥಿನಿಲಯ, ಹುಬ್ಬಳ್ಳಿಯಲ್ಲಿ ವಾದಿರಾಜ ಪ್ರತಿಷ್ಠಾನ ವಿದ್ಯಾರ್ಥಿನಿಲಯ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಬಿಜಾಪುರಗಳಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದರು. ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು, ಆಧುನಿಕ ಸೌಲಭ್ಯ, ಆರೋಗ್ಯಕರ ವಾತಾವರಣ, ಉತ್ತಮ ಗುಣಮಟ್ಟದ ಊಟೋಪಚಾರದ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬುವುದು ಶ್ರೀಗಳವರ ಉದ್ದೇಶ. ನಿಲಯಕ್ಕೆ ಬಂದ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಧ್ಯಾವಂದನೆ, ವಿಷ್ಣು ಸಹಸ್ರ ನಾಮ ಪಾರಾಯಣ, ವಾಯುಸ್ತುತಿ ಪಠಣ ಮಾಡಬೇಕು. ಸನಾತನ ಧರ್ಮ ಮತ್ತು ಸಂಸ್ಕೃತಿಯ ಚೌಕಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಮೂಲಕ ತಮ್ಮ ಜೀವನದ ಮೌಲ್ಯವನ್ನು ಕಟ್ಟಿಕೊಳ್ಳಬೇಕೆಂಬುವುದು ನಿಲಯದ ಮತ್ತು ಶ್ರೀಗಳವರ ಮೂಲ ಉದ್ದೇಶ.

ಶ್ರೀರಾಘವೇಂದ್ರ ವಿದ್ಯಾರ್ಥಿ ನಿಲಯ, ರಾಯಚೂರು

ಸನ್ 1953ರಲ್ಲಿ ಶ್ರೀರಾಘವೇಂದ್ರ ವಿದ್ಯಾರ್ಥಿನಿಲಯ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಯಿತು. ಇದು ಪರಮ ಗುರುಗಳ ಪ್ರೇರಣೆಯೆಂದರೆ ತಪ್ಪಾಗಲಾರದು. ಸನ್ 1964ರಲ್ಲಿ ದಾನಿಗಳಾದ ಶ್ರೀಯುತ ವಾಸುದೇವಾಚಾರ್ಯ ಸರೋದೆ ಮತ್ತು ಅವರ ತಂದೆ ಶ್ರೀಯುತ ರಾಮಾಚಾರ್ಯ ಸರೋದೆ, ಚಾರ್ಟರ್ಡ್ ಅಕೌಂಟೆಂಟ್ ಕೇವಲ ರೂ.500 ತೆಗೆದುಕೊಂಡು 120 X 162' ಅಂದರೆ 19440 ಚದರ ಅಡಿ ಜಾಗವನ್ನು ನಿಲಯಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ. ಶ್ರೀಹರಿ ವಾಯು ಗುರುಗಳ ಅನುಗ್ರಹ ಮತ್ತು ಕೊಡುಗೈ ದಾನಿಗಳ ದೇಣಿಗೆಯಿಂದ ವಿದ್ಯಾರ್ಥಿನಿಲಯ ತಲೆಎತ್ತಿ ನಿಂತಿತು. ನಿಲಯದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಮಹನೀಯರನ್ನು ಮಂಡಲ ಅಭಿನಂದಿಸುತ್ತದೆ.

ಶ್ರೀಕೃಷ್ಣ ಮಠ / ವಿದ್ಯಾರ್ಥಿ ನಿಲಯ, ಬೆಳಗಾವಿ

ಪರಮಪೂಜ್ಯ ಶ್ರೀಗಳವರು 1964ರಲ್ಲಿ ಶ್ರೀ ಜಗನ್ನಾಥ ವಾಸುದೇವ ಪೆರೂಳಿಕರ್ ಅವರ ಭೂಮಿಯನ್ನು ಮಾಧ್ವ ಮಹಾಮಂಡಲದ ಹೆಸರಿನಲ್ಲಿ ಕೊಂಡುಕೊಂಡರು. ಶ್ರೀಗಳವರ ಅಪೇಕ್ಷೆಯಂತೆ ಕಟ್ಟಡ ನಿರ್ಮಾಣದ ಗುರುತರ ಜವಾಬ್ದಾರಿಯನ್ನು ಸಂಪೂರ್ಣಗೊಳಿಸಿದ ಹೆಗ್ಗಳಿಕೆ ಶ್ರೀ ಆರ್. ಹೆಚ್. ಕುಲಕರ್ಣಿಯವರಿಗೆ ಸಲ್ಲುತ್ತದೆ. ನಿಲಯದ ಅಧ್ಯಕ್ಷತೆಯನ್ನು ಆರಂಭದ ಸಮಯದಲ್ಲಿ ಶ್ರೀ ವೈ. ಎನ್. ಲೀಲೆಯವರು ವಹಿಸಿದ್ದರು. ಶ್ರೀ ಆರ್.ಹೆಚ್. ಕುಲಕರ್ಣಿಯವರು ಕಾರ್ಯದರ್ಶಿಗಳಾಗಿದ್ದರು. ಶ್ರೀಯುತ ವಸಂತರಾವ್ ಪೊದ್ದಾರ್ ಅಧ್ಯಕ್ಷರಾಗಿದ್ದ ಕಾಲದಲ್ಲಿಯೂ ಸಹ ಶ್ರೀ ಆರ್.ಹೆಚ್. ಕುಲಕರ್ಣಿ ಅವರು ಕಾರ್ಯದರ್ಶಿಯಾಗಿದ್ದರು. ಸುದೀರ್ಘ ಸೇವೆಯ ಫಲವೆಂಬಂತೆ ಅಧ್ಯಕ್ಷರಾಗುವ ಭಾಗ್ಯವೂ ಶ್ರೀ ಆರ್.ಹೆಚ್. ಕುಲಕರ್ಣಿಯವರಿಗೆ ಬಂದೊದಗಿತು. ತದನಂತರ ಶ್ರೀ ಎಸ್.ಎಂ. ಕುಲಕರ್ಣಿಯವರು ಅಧ್ಯಕ್ಷರಾಗಿದ್ದಾರೆ. ಶ್ರೀ ಸುಭಾಸ್ ಕುಲಕರ್ಣಿ ಅವರು ಕಾರ್ಯದರ್ಶಿಗಳಾಗಿ ಅದ್ಭುತ ಸೇವೆಯನ್ನು ಮಾಡುತ್ತಾ ಇದ್ದಾರೆ. ನಿಲಯದ ಆದಾಯಕ್ಕಿಂತ ಖರ್ಚು ಜಾಸ್ತಿ ಬಂದರು ಸಹ ಯಾರನ್ನೂ ಕೇಳದೆ ನಿಲಯವನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಶ್ರೀಹರಿ ವಾಯು ಗುರುಗಳ ಅನುಗ್ರಹ ದೊರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಶ್ರೀಕೃಷ್ಣಮಠ / ವಿದ್ಯಾರ್ಥಿ ನಿಲಯ, ಬಾಗಲಕೋಟೆ

ಬಾಗಲಕೋಟೆಯ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ದಿ. ಗೋಪಾಲರಾವ್ ಛಬ್ಬಿಯವರು ತಮ್ಮ ಮಾತೋಶ್ರೀ ರುಕ್ಮಿಣಿಬಾಯಿ ಛಬ್ಬಿ ಇವರ ಸ್ಮರಣಾರ್ಥವಾಗಿ ಭೂದಾನವನ್ನು ಪ್ರಾತಃಸ್ಮರಣೀಯ ಯತಿದ್ವಯರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬಾಗಲಕೋಟೆಗೆ ಬಂದಾಗ ನಿಲಯ ನಿರ್ಮಾಣಕ್ಕೆ ಸನ್ 1956ರಲ್ಲಿ ನೀಡಿದರು. ಪೂಜ್ಯ ಶ್ರೀವಿದ್ಯಾಮಾನ್ಯರು ತಮ್ಮ ಗುರುಗಳಾದ ಪ್ರಾ.ಸ್ಮ.ಶ್ರೀ ಸತ್ಯಧ್ಯಾನತೀರ್ಥ ಸ್ಮರಣಾರ್ಥ ಆರ್ಥಿಕ ನೆರವು ನೀಡಿದ್ದರು. ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪಾದಕಾಣಿಕೆಯನ್ನು ನಿಲಯದ ಕಟ್ಟಡ ನಿಧಿಗೆ ಕೊಟ್ಟರು. ಬೀಳಗಿಯ ದಿ. ಗುಡೂರು ಹನುಮಂತರಾವ್, ದಿ. ರಂಗರಾವ್ ಪಾರ್ವತೀಕರ ಅವರ ತಂದೆಯ ಸ್ಮರಣಾರ್ಥ ನೀಡಿದ ದೇಣಿಗೆ, ದಿ. ಡಾ. ಹೆಚ್.ಎಂ. ಶಿರೂರ, ದಿ. ಭೀಮರಾವ್ ಪಾರ್ವತೀಕರ, ದಿ. ಡಾ. ರಾಘವೇಂದ್ರ ಬುರ್ಲಿ, ದಿ. ಸರದೇಸಾಯಿ ಹಾಗೂ ಇನ್ನೂ ಹಲವು ದಾನಿಗಳ ಆರ್ಥಿಕ ನೆರವಿನಿಂದ ಹತ್ತು ಕೊಠಡಿ, ಪ್ರಾರ್ಥನಾಮಂದಿರ, ಅಡಿಗೆಕೋಣೆ ಒಂದು ಹಂತದಲ್ಲಿ ನಿರ್ಮಿಸಲಾಯಿತು. ಮಾಧ್ವ ಮಹಾಮಂಡಲವೆಂದರೆ ತಮ್ಮದೇ ಆದ ಸ್ವಂತ ಸಂಸ್ಥೆ ಅಂತ ನಿಸ್ವಾರ್ಥ ಸೇವೆ ಸಲ್ಲಿಸಿದವರೆಂದರೆ ಶ್ರೀಯುತ ದಿ. ಭೀಮಾಚಾರ ಕಾಖಂಡಕಿ, ದಿ. ಧೀರಾಚಾರ ಹೆರಕಲ್, ದಿ. ಶ್ರೀನಿವಾಸರಾವ್ ನೀರಲಕೇರಿ, ದಿ. ಶ್ರೀನಿವಾಸಶಾಸ್ತ್ರಿ, ಡಾ. ಎಂ.ಜಿ. ಕೊಪ್ಪ, ದಿ. ಎ.ಎಸ್. ಕಾರಂತರು, ಶ್ರೀ ಬಾಲಕೃಷ್ಣ ಮಾರ್ಕೋಡ್, ಎಸ್.ಆರ್. ಗುಡಿ, ಪಂ. ಬಿಂದುಮಾಧವಾಚಾರ್ ನಾಗಸಂಪಿಗೆ, ಪಂ. ರಘೋತ್ತಮಾಚಾರ್ಯ ನಾಗಸಂಪಿಗೆ ಇನ್ನೂ ಅನೇಕರಿರಬಹುದು. ಎಲ್ಲರಿಗೂ ಅಭಿನಂದನೆಗಳು.

ಶ್ರೀವಾದಿರಾಜ ಪ್ರತಿಷ್ಠಾನ ವಿದ್ಯಾರ್ಥಿನಿಲಯ, ಹುಬ್ಬಳ್ಳಿ

ಸನ್ 1963ರಲ್ಲಿ ಶ್ರೀ ಗೋವಿಂದರಾವ್ ಕಾನಡೆಯವರು ಪೇಜಾವರ ಶ್ರೀಪಾದರ ಮೇಲಿನ ಗುರುಭಕ್ತಿಯಿಂದ ತಮ್ಮ 5 ಗುಂಟೆ ಜಾಗವನ್ನು ಗುರುಗಳಿಗೆ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ದಾನವಾಗಿ ಕೊಟ್ಟರು. ದೇವರ ಪ್ರೇರಣೆಯೋ ಏನೋ ಮತ್ತೆ 8 ಗುಂಟೆ ಜಾಗವನ್ನು ಗುರುಗಳಿಗೆ ಅತ್ಯಲ್ಪ ಬೆಲೆಗೆ ಕೊಟ್ಟು ಮಹದುಪಕಾರ ಮಾಡಿದರು. ಸನ್ 1966ರ ಹೊತ್ತಿಗೆ ಎಂಟು ಕೊಠಡಿಗಳು, ಅಡಿಗೆಮನೆ, ಭೋಜನಶಾಲೆಯ ನಿರ್ಮಾಣಕಾರ್ಯ ಮುಗಿದು ವಿದ್ಯಾರ್ಥಿನಿಲಯ ಪ್ರಾರಂಭವಾಯಿತು. ವಿಶ್ವದ ಶ್ರೇಷ್ಠ ಕರ್ನಾಟಕ ಸಂಗೀತ ಕಲಾವಿದರಾದ ಶ್ರೀಮತಿ ಎಂ.ಎಸ್. ಸುಬ್ಬಲಕ್ಷ್ಮಿ ಇವರ ಸಂಗೀತ ಕಛೇರಿ ಮತ್ತು ಹಿಂದೂಸ್ಥಾನಿ ಸಂಗೀತ ದಿಗ್ಗಜರಾದ ಭಾರತರತ್ನ ಶ್ರೀ ಭೀಮಸೇನ ಜೋಶಿ ಅವರ ದಾಸವಾಣಿ ಕಾರ್ಯಕ್ರಮದಿಂದ ಬಂದ ಆದಾಯದಿಂದ ಹೆಚ್ಚಿನ ಕೊಠಡಿಗಳ ನಿರ್ಮಾಣವಾಯಿತು. ಸನ್ 1997ರಲ್ಲಿ ನಿಲಯದ ಸಂಪೂರ್ಣ ವಹಿವಾಟನ್ನು ಶ್ರೀ ವಾದಿರಾಜ ಸೇವಾ ಪ್ರತಿಷ್ಠಾನವು ವಹಿಸಿಕೊಂಡು ನಿರ್ವಹಿಸುತ್ತಾ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಲೋಕಶಿಕ್ಷಣ ಟ್ರಸ್ಟ್ ವತಿಯಿಂದ ಕಾರ್ಯದರ್ಶಿಗಳಾದ ಶ್ರೀಯುತ ಶಾಮರಾಯರು 5 ಲಕ್ಷ ರೂಪಾಯಿ ಮತ್ತು ಶ್ರೀ ಆರ್.ಕೆ. ಕುಲಕರ್ಣಿ, ದುಬೈ, ಲಕ್ಷ ರೂಪಾಯಿ ದೇಣಿಗೆ ನೀಡಿದರು. ಇನ್ಫೋಸಿಸ್ ಸಂಸ್ಥೆ ಮಾಲೀಕರಾದ ಶ್ರೀಮತಿ ಸುಧಾಮೂರ್ತಿ ಹಾಗೂ ಶ್ರೀ ನಾರಾಯಣಮೂರ್ತಿ ಇವರ ಉದಾರ ದೇಣಿಗೆಯಿಂದ ವಿದ್ಯಾರ್ಥಿನಿಲಯ ಪುನರ್ ನಿರ್ಮಾಣವಾಯಿತು. ಉದ್ಘಾಟನೆಯನ್ನು ಶ್ರೀವ್ಯಾಸರಾಯರ ಮಠಾಧೀಶರಾದ ಶ್ರೀ ವಿದ್ಯಾವಾಚಸ್ಪತಿ ಶ್ರೀಗಳು ಮತ್ತು ಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ನೆರವೇರಿಸಿದರು.

ಪ್ರಸಿದ್ಧ ಉದ್ಯಮಿಗಳಾದ ಶ್ರೀ ಆರ್. ಕೆ. ಕುಲಕರ್ಣಿ, ದುಬೈ ಇವರು ಪುನಃ 11 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಮಂಗಳೂರು ಪ್ರಭಾಕರರಾಯರು, ಶ್ರೀ ಶ್ರೀನಿವಾಸ ದೇಶಪಾಂಡೆ, ಶ್ರೀ ಬಿ. ವಾಸುದೇವ ಅವರೂ ಸಹ ಉದಾರ ದೇಣಿಗೆಯನ್ನು ನೀಡುವ ಮೂಲಕ ಹುಬ್ಬಳ್ಳಿ ವಿದ್ಯಾರ್ಥಿನಿಲಯ ಉತ್ತಮ ಹಂತವನ್ನು ತಲುಪಿತು. ಇಂದು 84 ಸುಸಜ್ಜಿತ ಕೊಠಡಿಗಳು, ಭೋಜನ ಶಾಲೆ, ಗ್ರಂಥಾಲಯ, ಸುಧರ್ಮ ಸಭಾಂಗಣದೊಂದಿಗೆ ರಾರಾಜಿಸುತ್ತಿದೆ. ನಿಲಯದ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಈ ಕೆಳಗಿನ ಮಹನೀಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸನ್ 2026ರಲ್ಲಿ ನಿಲಯದ 60ರ ಸಂಭ್ರಮವನ್ನು ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಮತ್ತು ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ವೈಭವದಿಂದ ನೆರವೇರಿಸಿದರು.

ಶ್ರೀ ಜಯತೀರ್ಥ ವಿದ್ಯಾರ್ಥಿನಿಲಯ, ಕಲಬುರ್ಗಿ

ಸನ್ 1965ರಲ್ಲಿ ತಹಸೀಲ್ದಾರ್, ಕಲಬುರ್ಗಿ ಅವರು ಶ್ರೀಪೇಜಾವರ ಮಠಕ್ಕೆ (280' x 85') 23800 ಚದರ ಅಡಿ ಜಾಗವನ್ನು ನಿಲಯ ನಿರ್ಮಾಣಕ್ಕೆ ಉಚಿತವಾಗಿ ಮಂಜೂರು ಮಾಡಿದರು. ತದನಂತರ ಸನ್ 1969ರಲ್ಲಿ ಶ್ರೀ ಜಯತೀರ್ಥ ವಿದ್ಯಾರ್ಥಿನಿಲಯ ಮತ್ತು ಶ್ರೀಕೃಷ್ಣಮಂದಿರದ ಕಟ್ಟಡ ನಿರ್ಮಾಣ ಸಂಪೂರ್ಣವಾಯಿತು. ದಾನಿಗಳ ಉದಾರ ಮನಸ್ಸಿನಿಂದ ನೀಡಿದ ದೇಣಿಗೆ ಕಟ್ಟಡ ನಿರ್ಮಾಣ ಪರಿಪೂರ್ಣವಾಗಲು ನೆರವಾಯಿತು. ಈ ನಿಲಯ ಮತ್ತು ಶ್ರೀಕೃಷ್ಣ ಮಠದ ಏಳಿಗೆಗೆ ಶ್ರಮಿಸಿದ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸುವುದು ಮಂಡಲ ಆದ್ಯ ಕರ್ತವ್ಯ. ಅಂತಹ ಮಹನೀಯರ ವಿವರ ಕೆಳಗಿನಂತೆ ಇದೆ.