- ಕರ್ನಾಟಕ: ಆರ್. ಟಿ. ನಗರ, ಜೆ. ಪಿ. ನಗರ, ಜಯನಗರ, ದೂರವಾಣಿ ನಗರ, ಕೋಣನಕುಂಟೆ, ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ
- ತಮಿಳುನಾಡು: ಹೊಸೂರು, ಚೆನ್ನೈ, ಪೆರಿಯಾಪಟ್ಟಣ, ಚಾಮರಾಜ ನಗರ, ಶ್ರೀರಂಗಂ, ನಂಗನಲ್ಲೂರ್, ಕರೂರು
- ಆಂಧ್ರ ಪ್ರದೇಶ: ಕರ್ನೂಲ್ ಮತ್ತು ಹೈದ್ರಾಬಾದ್
ಹುಬ್ಬಳ್ಳಿ ಶಾಖೆ
ಯತಿಕುಲಚಕ್ರವರ್ತಿಗಳಾದ ಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸನ್ 2006-07ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ವಿಶ್ವಹಿಂದೂಪರಿಷತ್ ಸಭೆಯಲ್ಲಿ ಭಾಗವಹಿಸಿದ್ದರು. ಅಂದು ಏಕಾದಶಿ. ಸಭೆಯ ನಂತರ ಶ್ರೀಕೃಷ್ಣ ಕಲ್ಯಾಣಮಂಟಪದಲ್ಲಿ ನಡೆದ ಸಭೆಯಲ್ಲಿ ಶ್ರೀಗಳವರು ಹಿಂದೆ ಸ್ಥಾಪಿಸಿದ ಅಖಿಲ ಭಾರತ ಮಾಧ್ವ ಮಹಾಮಂಡಲ ನಿಷ್ಕ್ರಿಯವಾಗಿದ್ದು, ಮಂಡಲವನ್ನು ಪುನರ್ ಸ್ಥಾಪಿಸುವ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸನ್ 2007ರ ಜನವರಿ ತಿಂಗಳಲ್ಲಿ ಸ್ವತಃ ಶ್ರೀಗಳವರು ಹುಬ್ಬಳ್ಳಿಗೆ ಆಗಮಿಸಿ ದೀಪ ಪ್ರಜ್ವಾಲನೆ ಮೂಲಕ ಚಾಲನೆ ನೀಡಿದರು. ಶ್ರೀ ಬಿ. ವಾಸುದೇವ, ಉದ್ಯಮಿಯನ್ನು ಅಧ್ಯಕ್ಷರನ್ನಾಗಿ ಶ್ರೀ ಶ್ರೀಪಾದ ಮ. ಸಿಂಗನಮಲ್ಲಿ ಇವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದರು. ನೂತನ ಕಾರ್ಯಕಾರಿ ಸಮಿತಿಯ ಸದಸ್ಯರು ಶ್ರೀಗಳವರು ಆಯೋಜಿಸಿದ್ದ ಅಷ್ಟಾದಶ ಪುರಾಣಪ್ರವಚನ ಮಾಲಿಕೆಯಿಂದ ಆರಂಭಿಸಿ ಪ್ರತಿ ತಿಂಗಳು ಒಂದುವಾರ ಜ್ಞಾನ ಕಾರ್ಯವನ್ನು ಹಮ್ಮಿಕೊಳ್ಳುತ್ತಾ ಉತ್ತಮ ಕೆಲಸವನ್ನು ಆರಂಭಿಸಿತು. ಮಹಾಭಾರತ ಪ್ರವಚನ ಮಾಲಿಕೆ ಎರಡು ವರ್ಷ, ಭಗವದ್ಗೀತೆ ಪ್ರತಿ ಶ್ಲೋಕ ಪ್ರವಚನ ಎರಡು ವರ್ಷ, ರಾಮಾಯಣ ಪ್ರವಚನ, ಅನೇಕ ಸಂವಾದ ಕಾರ್ಯಕ್ರಮ, ವೈದ್ಯಕೀಯ ಶಿಬಿರ, ಧಾರ್ಮಿಕ ಶಿಬಿರ, ವೇದ ವೈದ್ಯ ಸಮ್ಮಿಲನ, ಹಲವು ಹರಿಕಥೆ ಕಾರ್ಯಕ್ರಮಗಳು, ತಾಳಮದ್ದಳೆ, ದಾಸವಾಣಿ ಕಾರ್ಯಕ್ರಮಗಳು, ರಂಗ ಬಾರೋ ಪಾಂಡುರಂಗ ಬಾರೋ ಎಂಬ ಶೀರ್ಷಿಕೆ ಅಡಿಯಲ್ಲಿ ರಾಜ್ಯಮಟ್ಟದ ದಾಸರ ಹಾಡಿನ ಸ್ಪರ್ಧೆ (ಎಂಟು ವರ್ಷ), ಸಾಮೂಹಿಕ 108 ದಂಪತಿಗಳಿಂದ ಶ್ರೀಸತ್ಯನಾರಾಯಣ ಪೂಜೆ, ಪ್ರತಿ ಬಡಾವಣೆಗೆ ಹೋಗಿ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸುವುದು, ಶಾಲೆ ಕಾಲೇಜಿಗೆ ಹೋಗಿ ಮಕ್ಕಳಿಗೆ ನೀತಿಕಥೆಯ ಬೋಧನೆಯ ಅಪೂರ್ವ ಕಾರ್ಯಕ್ರಮದ ಯೋಜನೆ.
ಪೂಜ್ಯ ಶ್ರೀಗಳವರ ಪಟ್ಟಾಭಿಷೇಕ ಮಹೋತ್ಸವ, ಸಂಗೀತ ಕಛೇರಿಗಳು, 1008 ನಾರಿಕೇಲ ಗಣಯಾಗ ಇನ್ನೂ ಹತ್ತು ಹಲವಾರು ಉತ್ತಮ ಕಾರ್ಯಕ್ರಮಗಳ ಮೂಲಕ ಶ್ರೀಗಳವರಿಗೆ ಅಚ್ಚುಮೆಚ್ಚಿನ ಶಾಖೆಯಾಗಿತ್ತು. ಪ್ರತಿ ಕಾರ್ಯಕ್ರಮಕ್ಕೂ ಶ್ರೀಗಳವರು ಆಗಮಿಸಿ ಅಮೃತೋಪದೇಶವನ್ನು ನೀಡಿದ ಸಂದರ್ಭಗಳು ಹುಬ್ಬಳ್ಳಿಯ ಸಾಧನಾ ಪುಟದಲ್ಲಿ ದಾಖಲಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಶ್ರೀ ಬಿ. ವಾಸುದೇವ ವೈಯಕ್ತಿಕ ಕಾರಣಗಳಿಂದ ಬೆಂಗಳೂರಿಗೆ ಹೋದ ಕಾರಣ ಅಧ್ಯಕ್ಷ ಸ್ಥಾನವನ್ನು ಸ್ವಾಮಿಗಳು ಶ್ರೀ ಶ್ರೀಪಾದ ಮ. ಸಿಂಗನಮಲ್ಲಿಗೆ ಕೊಟ್ಟರು. ಶ್ರೀ ಕೃಷ್ಣರಾಜ ಕೆಮ್ಮೂರು ಅವರು ಕಾರ್ಯಾಧ್ಯಕ್ಷರಾಗಿ, ಶ್ರೀ ಅನಂತರಾಜ್ ಭಟ್ ಅವರು ಕಾರ್ಯದರ್ಶಿಯಾಗಿ ಉತ್ತಮ ಸೇವೆಯನ್ನು ಮಾಡಿದ್ದಾರೆ. ಸುಮಾರು 4500 ಚದರಅಡಿ ಜಾಗವನ್ನು ಲೀಸ್ ರೆಂಟ್ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಶ್ರೀಪಾದರ ಆದೇಶದ ಮೇರೆಗೆ ಅಪರಕರ್ಮಕ್ಕೆ ಬೇಕಾದ ಕಟ್ಟಡವನ್ನು ನಿರ್ಮಾಣ ಮಾಡಲು ಸಂಕಲ್ಪಿಸಲಾಗಿದೆ.
ಜೆ. ಪಿ. ನಗರ / ಜಯನಗರ ಶಾಖೆ
ಶ್ರೀ ಎಂ. ನಾಗರಾಜರಾವ್ ಇವರ ಅಧ್ಯಕ್ಷತೆಯಲ್ಲಿ ಸನ್ 1983ರಲ್ಲಿ ಜೆ.ಪಿ. ನಗರ ಮತ್ತು ಜಯನಗರ ಶಾಖೆಯು ಪ್ರಾರಂಭವಾಯಿತು. ಪ್ರತಿವರ್ಷ ಎರಡೂ ಶಾಖೆಯ ಜಂಟಿ ಆಶ್ರಯದಲ್ಲಿ 10 ದಿನಗಳ ಕಾಲ ಜ್ಞಾನಸತ್ರ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಬಂದಿದೆ. ಸನ್ 1988 ರಿಂದ 1997ವರೆಗೆ ಶ್ರೀ ಎಂ. ಕೃಷ್ಣಮೂರ್ತಿ ಅಧ್ಯಕ್ಷರಾಗಿದ್ದರು. ಶ್ರೀ ಎಲ್. ಲಕ್ಷ್ಮಣರಾವ್ ಕಾರ್ಯದರ್ಶಿಯಾಗಿದ್ದರು. ಸನ್ 1998ರಿಂದ ಇಲ್ಲಿಯವರೆಗೆ ಶ್ರೀ ಮಧುರಾವ್ ಇವರು ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಶ್ರೀ ಎಂ.ಜಿ. ನಾಗರಾಜರಾವ್, ಶ್ರೀ ಜಿ. ಕೃಷ್ಣಮೂರ್ತಿ, ಶ್ರೀ ಆರ್. ಮಧ್ವರಾಜ್, ಶ್ರೀ ಪಿ.ಆರ್. ಬಾಲಾಜಿ ಇವರುಗಳು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಅಭಿನಂದನೆಗಳು.
ಮಹಿಳಾ ಪರಿಷತ್, ಬೆಂಗಳೂರು
ಅಖಿಲ ಭಾರತ ಮಾಧ್ವ ಮಹಾಮಂಡಲ ಮಹಿಳಾ ಪರಿಷತ್ ಸನ್ 2014ರಲ್ಲಿ ಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪರಮಾನುಗ್ರಹದಿಂದ ಪ್ರಾರಂಭವಾಯಿತು. ಶ್ರೀಮತಿ ರಾಜಲಕ್ಷ್ಮಿ ಪಾರ್ಥಸಾರಥಿಯವರು ಸಂಸ್ಥೆಯ ಅಧ್ಯಕ್ಷರಾಗಿ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಸಂಸ್ಥೆಯ ಸದಸ್ಯೆಯರೆಲ್ಲರೂ ನಿಷ್ಠಾವಂತರು. ಅನೇಕರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಚರ್ಚಾಗೋಷ್ಠಿ, ಹರಿಕಥಾಮೃತಸಾರ ಪಾರಾಯಣ, ಯೋಗ, ವೈದ್ಯಕೀಯ ಶಿಬಿರ, ಭಜನೆ, ದಾಸ ಸಾಹಿತ್ಯಚಿಂತನ, ಜ್ಯೋತಿಷ್ಯ ಮತ್ತು ವಿಜ್ಞಾನ ವಿಮರ್ಶಾತ್ಮಕ ಚಿಂತನೆ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿದ ಕೀರ್ತಿ ಮಹಿಳಾ ಪರಿಷತ್ ಗಳಿಸಿದೆ.
ಅಖಿಲ ಭಾರತ ಮಾಧ್ವ ಮಹಾಮಂಡಲ ಯುವಪರಿಷತ್
ಮಹಿಳಾಪರಿಷತ್ ಮತ್ತು ಯುವಪರಿಷತ್ ಎರಡು ವಿಭಾಗಗಳನ್ನು ಸನ್ 2014ರಂದು ಯತಿಕುಲಚಕ್ರವರ್ತಿ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು. ಯುವಪರಿಷತ್ಗೆ ಶ್ರೀ ಎಂ. ವಿ. ಮಾಧವ ಮತ್ತು ಶ್ರೀಗುರುರಾಜ ಕುಲಕರ್ಣಿಯವರನ್ನು ನೇಮಿಸಿದರು. ಯುವಪರಿಷತ್ ಮಕ್ಕಳಿಗೋಸ್ಕರ ಬಾಲಗೋಕುಲವೆಂಬ ಅದ್ಭುತ ಕಾರ್ಯಕ್ರಮವನ್ನು ಬೆಂಗಳೂರು, ಉಡುಪಿ ಮುಂತಾದ ಕಡೆ ಯಶಸ್ವಿಯಾಗಿ ಆಯೋಜಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ.
