ಕೇವಲ 21ವರ್ಷ ಪ್ರಾಯದಲ್ಲಿ ಸರ್ವಜ್ಞಪೀಠವನ್ನು ಅಲಂಕರಿಸಿ ಪ್ರಥಮ ಪರ್ಯಾಯವನ್ನು ನಡೆಸಿದ ಕೀರ್ತಿ ಶ್ರೀಗಳವರ ಮುಡಿಗೇರಿತು. ಧರ್ಮಪ್ರಚಾರ, ಮಾಧ್ವ ಸಂಘಟನೆಗೆ ಶ್ರೀಗಳವರು ದೃಢಸಂಕಲ್ಪವನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಶ್ರೀಗಳವರು ಅಖಿಲ ಭಾರತ ಮಾಧ್ವ ಮಹಾಮಂಡಲವೆಂಬ ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಂಡರು. ಶ್ರೀಗಳವರ ಕನಸನ್ನು ನನಸಾಗಿಸಲು ವಿದ್ವಾನ್ ಬುರ್ಲಿ ಬಿಂದುಮಾಧವಾಚಾರ್, ಪಂಡಿತ ಪಂಢರೀನಾಥಾಚಾರ್ ಗಲಗಲಿ, ವಿದ್ವಾನ್ ಸೀತಾರಾಮರಾಯರು, ಪ್ರೊ. ಬಿ.ವೆಂಕಟೇಶಾಚಾರ್, ಪಂ.ಗುರುರಾಜಾಚಾರ್ ಪಾಂಡುರಂಗಿಯವರು ಕಟಿಬದ್ಧರಾಗಿ ನಿಂತರು.
ಅನೇಕ ಸಮಸ್ಯೆ, ವಿರೋಧದ ಮಧ್ಯೆಯೂ ತಮ್ಮ ನಿಲುವನ್ನು ಬದಲಿಸದೆ ಅಖಿಲ ಭಾರತ ಮಾಧ್ವ ಮಹಾಮಂಡಲವನ್ನು ಶ್ರೀಗಳವರು ಸನ್ 1953ರಲ್ಲಿ ಉಡುಪಿಯ ತಮ್ಮ ಪ್ರಥಮ ಪರ್ಯಾಯ ಮತ್ತು ತತ್ವಜ್ಞಾನ ಸಮ್ಮೇಳನದಲ್ಲಿ ಸ್ಥಾಪಿಸಿದರು. ಅದರ ಉದ್ಘಾಟನೆಯನ್ನು ಮೈಸೂರಿನ ಅಂದಿನ ಅರಸರಾದ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರಿಂದ ನೆರವೇರಿಸಿದರು. ಅಂದಿನಿಂದ ಇಲ್ಲಿಯವರೆಗೂ ತತ್ವಜ್ಞಾನ ಸಮ್ಮೇಳನವು ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ನಡೆಯುತ್ತಾ ಬಂದಿದೆ.
ಪೂರ್ಣಪ್ರಜ್ಞ ವಿದ್ಯಾಪೀಠ
ಈಗಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪೂರ್ವದಲ್ಲಿ ಮಹಾತಪಸ್ವಿಗಳಾದ ಶ್ರೀವಿದ್ಯಾಮಾನ್ಯ ಶ್ರೀಪಾದರು ಮತ್ತು ಶ್ರೀವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನ ಕಲ್ಯಾಣಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿದ್ಯಾಪೀಠ ನಡೆಸುತ್ತಿದ್ದರು. ನಂತರ ಈಗಿರುವ ವಿದ್ಯಾಪೀಠದ ಭೂಮಿಯನ್ನು ಶ್ರೀ ಪಿ.ಡಿ.ನಾಯಕ್ ಇವರಿಂದ ಮಾಧ್ವ ಮಹಾಮಂಡಲ ಹೆಸರಿನಲ್ಲಿ ಖರೀದಿಸಿ ಸನ್ 1956ರಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವೆಂಬ ಜ್ಞಾನವೃಕ್ಷವನ್ನು ಬೆಳೆಸಿದರು, ಪೋಷಿಸಿದರು. ಮನೆಮನೆಗೆ ಹೋಗಿ ಮಕ್ಕಳನ್ನು ವಿದ್ಯಾಪೀಠಕ್ಕೆ ಕರೆತಂದರು. ತಂದೆ-ತಾಯಿ ಪ್ರೀತಿ ವಾತ್ಸಲ್ಯವನ್ನು, ಸಕಲ ವೇದಾಂತ, ಶಾಸ್ತ್ರವಿದ್ಯೆಯನ್ನು ಶಿಷ್ಯರಿಗೆ ಧಾರೆಯೆರೆದರು. ಅದರ ಫಲವೇ ಸಾವಿರಾರು ಪಂಡಿತರು ದೇಶಾದ್ಯಂತ ಪರಿಕ್ರಮಿಸಿ ಸಿದ್ಧಾಂತ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಪ್ರಸ್ತುತ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶ ಶ್ರೀಪಾದರು ಪೂಜ್ಯ ವಿಶ್ವೇಶತೀರ್ಥ ಶ್ರೀಪಾದರ ಶಿಷ್ಯರ ಮೊದಲ ಗುಂಪಿನಲ್ಲಿದ್ದ ಶಿಷ್ಯರಲ್ಲಿ ಒಬ್ಬರು. ಪೂರ್ವಾಶ್ರಮದ ನಾಮಧೇಯ ವಿದ್ವಾನ್ ಡಿ. ಪ್ರಹ್ಲಾದಾಚಾರ್ಯ. ತರ್ಕಶಾಸ್ತ್ರ, ವೇದಾಂತ ಪ್ರವೀಣರು, ಕಾಶಿ ಮುಂತಾದ ಉತ್ತರಭಾರತದಲ್ಲಿ ಘನಪಂಡಿತರೆಂದು ಹೆಸರುವಾಸಿಯಾದವರು. ಶ್ರೀಯುತರು ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದರು ಮತ್ತು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿಗಳಾಗಿದ್ದರು. ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷರಾಗಿ ಸನ್ 2016 ರಿಂದ 2017 ಜೂನ್ ತನಕ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಂತರ ಅವರು ಶ್ರೀವ್ಯಾಸರಾಜಮಠದ ಯತಿಗಳಾಗಿ ಪಟ್ಟಾಭಿಷಿಕ್ತರಾದರು.
