ರಾಮಕುಂಜದಲ್ಲಿ ಸನ್ 1931ರ ಏಪ್ರಿಲ್ 27ರಂದು ಶ್ರೀ ನಾರಾಯಣಾಚಾರ್ಯ ಮತ್ತು ಶ್ರೀಮತಿ ಕಮಲಮ್ಮ ದಂಪತಿಗಳ ಮಗನಾಗಿ ಜನನ. ಮಗುವಿಗೆ ವೆಂಕಟರಮಣನೆಂದು ನಾಮಕರಣವಾಗುತ್ತದೆ. ವೆಂಕಟರಮಣನ ಪ್ರಾಥಮಿಕ ಶಿಕ್ಷಣ ರಾಮಕುಂಜದ ಶಾಲೆಯಲ್ಲಿ ನಡೆಯಿತು. ಸಕಾಲಕ್ಕೆ ಉಪನಯನವನ್ನು ಮಾಡಿ ವಟುವನ್ನು ಉಡುಪಿಗೆ ತಂದೆ ತಾಯಿಗಳು ಕರೆತರುತ್ತಾರೆ. ಅಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪರ್ಯಾಯ. ಪೂಜ್ಯ ಶ್ರೀ ಶ್ರೀ ವಿಶ್ವಮಾನ್ಯತೀರ್ಥ ಶ್ರೀಪಾದಂಗಳವರು ಈ ಪುಟ್ಟ ಬಾಲಕನಲ್ಲಿ ಅದ್ಭುತ ತೇಜಸ್ಸು ಕಂಡು ಬೆರಗಾಗುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಕೃಷ್ಣನ ಪೂಜೆ ನೋಡುತ್ತಿದ್ದ ಈ ಮುಗ್ಧ ಬಾಲಕನ ಮುಖ ಕಮಲವನ್ನು ಗಮನಿಸಿದ ಗುರುಗಳು ಮುಂದೊಂದು ದಿನ ಇವನು ಸರ್ವಜ್ಞಪೀಠವನ್ನು ಅಲಂಕರಿಸಬಲ್ಲ ಎಂಬ ಅರಿವು ಗುರುಗಳ ಮನದಲ್ಲಿ ಮಿಂಚಿನಂತೆ ಮೂಡುತ್ತದೆ. ಶ್ರೀಹರಿ ವಾಯು ಗುರುಗಳ ಸಂಕಲ್ಪವೂ ಕೂಡ ಅದೇ ಆಗಿತ್ತು.

ಸನ್ 1938ರಲ್ಲಿ ಶ್ರೀವ್ಯಾಸರಾಜರು ಸ್ಥಾಪಿಸಿದ ಶ್ರೀಯಂತ್ರೋದ್ಧಾರಕ ಹನುಮಂತದೇವರ ಸನ್ನಿಧಾನದಲ್ಲಿ ಪೂಜ್ಯ ಶ್ರೀ ವಿಶ್ವಮಾನ್ಯಶ್ರೀಪಾದರು ವೆಂಕಟರಮಣನಿಗೆ ತುರ್ಯಾಶ್ರಮವಿತ್ತು ಶ್ರೀವಿಶ್ವೇಶತೀರ್ಥರೆಂದು ನಾಮಕರಣ ಮಾಡಿದರು. ಏಳು ವರ್ಷದ ಬಾಲಕ ಅಧೋಕ್ಷಜ ಮಠದ ಪೀಠಾಧಿಪತಿ. ಕಾಲಕ್ರಮೇಣದಲ್ಲಿ ಪರಮಪೂಜ್ಯ ಶ್ರೀಭಂಡಾರಕೇರಿಮಠದ ಶ್ರೀಗಳಾದ ಶ್ರೀವಿದ್ಯಾಮಾನ್ಯತೀರ್ಥರ ಭೇಟಿಯಾಗುತ್ತದೆ. ಬಾಲಯತಿಯಲ್ಲಿ ಅಡಗಿರುವ ಅಪ್ರತಿಮ ಬುದ್ಧಿಕೌಶಲ್ಯ, ಚಾಕಚಕ್ಯತೆಯು ಶ್ರೀವಿದ್ಯಾಮಾನ್ಯರನ್ನೂ ಪುಳಕಿತಗೊಳಿಸುತ್ತದೆ. ಅವರೇ ಬಾಲಯತಿಗಳಿಗೆ ವಿದ್ಯಾಗುರುಗಳಾಗುತ್ತಾರೆ. ವಿದ್ಯಾಮಾನ್ಯರು ತಮ್ಮೆಲ್ಲ ವಿದ್ಯೆಯನ್ನು ಶಿಷ್ಯನಿಗೆ ಧಾರೆ ಎರೆಯುತ್ತಾರೆ. ಉಡುಪಿಯಲ್ಲಿ ನಡೆದ ಮಧ್ವಸಿದ್ಧಾಂತರಾದ್ಧಾಂತ ಸಭೆಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ನೆರೆದ ಘನಪಂಡಿತರ, ಅನೇಕ ಯತಿಗಳ ಪ್ರಶಂಸೆಗೆ ಬಾಲಯತಿಗಳು ಪಾತ್ರರಾಗುತ್ತಾರೆ. ಶ್ರೀವಿಶ್ವೇಶತೀರ್ಥ ಶ್ರೀಪಾದರ ಅದ್ಭುತ ಪಾಂಡಿತ್ಯಕ್ಕೆ ಮಾರು ಹೋದ ಮೈಸೂರು ಅರಸರಾದ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀಗಳವರನ್ನು ಅರಮನೆಯಲ್ಲಿ ಸಂಸ್ಥಾನ ಪೂಜೆಗೆ ಆಹ್ವಾನ ನೀಡಿದ್ದರು. ಮಹಾರಾಜರ ಆಮಂತ್ರಣವನ್ನು ಮನ್ನಿಸಿ ಸಂಸ್ಥಾನ ಪೂಜೆಯನ್ನು ರಾಜರ ಅರಮನೆಯಲ್ಲಿ ನೆರವೇರಿಸಿದರು. ಶ್ರೀವಿಶ್ವೇಶತೀರ್ಥ ಶ್ರೀಪಾದರ ಪಾಂಡಿತ್ಯ, ಘನತೆ, ಗೌರವ ಹಿಮಾಲಯದೆತ್ತರಕ್ಕೆ ಬೆಳೆಯುತ್ತಾ ಹೋಯಿತು.