ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ 1956ರಲ್ಲಿ ತತ್ವವಾದವೆಂಬ ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ಮೊಟ್ಟ ಮೊದಲು ಪ್ರಕಟಪಡಿಸಿದ ಖ್ಯಾತಿ ಪೇಜಾವರ ಶ್ರೀಗಳವರಿಗೆ ಸಲ್ಲಿತು. ಈ ಮುಖಪತ್ರಿಕೆಯಲ್ಲಿ ಅನೇಕ ವಿದ್ವಾಂಸರಿಂದ ಉತ್ತಮ ಲೇಖನಗಳನ್ನು ಸಂಗ್ರಹಿಸಿ ಪ್ರಕಾಶನ ಮಾಡಲಾಗುತ್ತಿದೆ. ವಿಶೇಷವೆಂದರೆ ಈ ಮಾಸಪತ್ರಿಕೆಯಲ್ಲಿ ಶ್ರೀವಿಶ್ವೇಶವಾಣಿ ಎಂಬ ಸ್ವಾಮಿಗಳ ಲೇಖನವು ಭಕ್ತರ ಹಾಗೂ ಓದುಗರ ಮನಸ್ಸನ್ನು ಆಕರ್ಷಿಸಿದೆ.

ಸರಳ ಶಬ್ದಗಳ ಪ್ರಯೋಗ ಮತ್ತು ಮಾರ್ಮಿಕ ಶೈಲಿಯ ವಿವರಣೆ. ಶ್ರೀಗಳವರ ಧಾರ್ಮಿಕ ಪ್ರಶ್ನೋತ್ತರ ಅಂಕಣವು ಪಾಮರರ ಮನಸ್ಸಿನಲ್ಲಿರುವ ದ್ವಂದ್ವಗಳಿಗೆ ಸೂಕ್ತ ಪರಿಹಾರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕಿರುಹೊತ್ತಿಗೆ ಮೂಲಕ ಪೂಜ್ಯ ಶ್ರೀಗಳವರು ಧರ್ಮಪ್ರಚಾರ ಮತ್ತು ಮಧ್ವ ಸಿದ್ಧಾಂತದ ಪರಿಚಯವನ್ನು ಪಾಮರರಿಗೂ ತಿಳಿಸುವ ಪ್ರಯತ್ನವನ್ನು ಅಖಿಲ ಭಾರತ ಮಾಧ್ವ ಮಹಾಮಂಡಲ ವತಿಯಿಂದ ಮಾಡಿಸುತ್ತಿದ್ದಾರೆ.

ಈ ಮಾಸಪತ್ರಿಕೆಯ ಸಂಪಾದಕರಾಗಿ ಪಂ. ಪಂಢರೀನಾಥಾಚಾರ್ ಗಲಗಲಿಯವರು ಗದಗದಿಂದ ಪ್ರಕಾಶನ ಕಾರ್ಯವನ್ನು ಹಗಲು ರಾತ್ರಿ ಎನ್ನದೇ ಗುರುಗಳ ಮೇಲಿನ ಭಕ್ತಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು. ಇವರ ಜೊತೆ ಎಂ. ಕೆ. ಭಾರತೀರಾಮಣಾಚಾರ್ಯರೂ ಸಹ ಹೆಗಲಿಗೆ ಹೆಗಲು ಕೊಟ್ಟು ಸಕಾಲದಲ್ಲಿ ಮಾಸಪತ್ರಿಕೆ ಮುದ್ರಣವಾಗಿ ಓದುಗರ ಕೈಸೇರುವಂತೆ ನೋಡಿಕೊಳ್ಳುವುದು ಸಾಧಾರಣ ಜವಾಬ್ದಾರಿ ಅಲ್ಲ. ಮಹಾನ್ ಕಾರ್ಯಗಳು – ಮಹಾನ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಅವರ ನಂತರ ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸರು, ಮಹಾಮಹೋಪಾಧ್ಯಾಯ ಪುರಸ್ಕೃತರಾದ ಅಧ್ಯಾಪಾಡಿ ಹರಿದಾಸ್ ಭಟ್ ಸಂಪಾದಕರಾಗಿ ನೇಮಕಗೊಂಡರು. ಅವರ ಧೀಮಂತ ನೇತೃತ್ವದಲ್ಲಿ ತತ್ವಜ್ಞಾನಗಂಗೆ ಮಾಸಪತ್ರಿಕೆಯ ಮೂಲಕ ಇಂದಿಗೂ ನಿರಂತರವಾಗಿ ಹರಿಯುತ್ತಿರುವಂತೆ ನೋಡಿಕೊಂಡು ಬರುತ್ತಿದ್ದಾರೆ. ಇಂತಹ ಮಹನೀಯರ ನಿಸ್ವಾರ್ಥ ಸೇವೆಯ ಫಲವೇ ತತ್ವವಾದ ಮಾಸಪತ್ರಿಕೆಯ ಜನಪ್ರಿಯತೆ ಮತ್ತು ಉತ್ತಮ ಗುಣಮಟ್ಟ ತಲುಪಲು ಕಾರಣವಾಯಿತು. ಆರಂಭದಲ್ಲಿ ಮಾಸಪತ್ರಿಕೆಯ ಮುದ್ರಣ ವೆಚ್ಚಕ್ಕೂ ಶ್ರೀಗಳವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಮಂಡಲ ತನ್ನ ಕಾಲ ಮೇಲೆ ನಿಲ್ಲುವ ಸ್ಥಿತಿಗೆ ಬರುತ್ತಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಸಂಪಾದಕರಿಗೆ ಲೇಖನಗಳ ಸಂಗ್ರಹ, ಡಿಟಿಪಿ ಮಾಡಿಸುವುದು, ಲೇಖನಗಳ ತಿದ್ದುಪಡಿ ಮುಂತಾದ ಕೆಲಸಗಳ ಜವಾಬ್ದಾರಿಯನ್ನು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀ ವೆಂಕಟೇಶ್ ಪುರೋಹಿತರು ಮಾಡುತ್ತಿದ್ದಾರೆ. ಅವರ ಸೇವೆಯೂ ಕೂಡ ಶ್ಲಾಘನೀಯ.